ಸ್ವಾಗತ ನಿಮ್ಮ ಬುಟ್ಟಿ (0) | ಒಳಗೆ | ನೋಂದಾಯಿಸು
ಸುದ್ದಿ ಸಮಾಚಾರ:
ಪ್ರಾಧಿಕಾರದ ಪ್ರಕಟಣೆಗಳಿಗೆ ಶೇ.50% ರಿಯಾಯಿತಿ - ಹೆಚ್ಚಿನ ಮಾಹಿತಿಗೆ | ಪುಸ್ತಕಗಳನ್ನು ಕೊಂಡುಕೊಳ್ಳುವ ಬಗೆ - ಹೆಚ್ಚಿನ ಮಾಹಿತಿಗೆ |

ಹೊಸ ರೂಪದ ಕನ್ನಡ ಪುಸ್ತಕ ನೀತಿ ರಚನೆಗೆ ಸಮಿತಿ ನೇಮಕ

ಪ್ರಕಟಿತ ವರ್ಷ : 10 Aug 2021 07:56 pm

ಹೊಸ ರೂಪದ ಕನ್ನಡ ಪುಸ್ತಕ ನೀತಿ ರಚನೆಗೆ ಸಮಿತಿ ನೇಮಕ - ಡಾ. ಎಂ.ಎನ್.ನಂದೀಶ್ ಹಂಚೆ

ಕನ್ನಡ ಪುಸ್ತಕೋದ್ಯಮದ ಸಮಗ್ರ ಅಭಿವೃದ್ಧಿಗಾಗಿ ಆಧುನಿಕ ಮಾಧ್ಯಮಗಳ ಸವಾಲುಗಳನ್ನು ಒಳಗೊಂಡ ಹೊಸ ಪುಸ್ತಕ ನೀತಿ ರಚನೆಗೆ ನೂತನ ಸಮಿತಿಯೊಂದನ್ನು ರಚನೆ ಮಾಡಲಾಗುತ್ತಿದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಎಂ.ಎನ್. ನಂದೀಶ್ ಹಂಚೆ ಹೇಳಿದ್ದಾರೆ.

ಅವರು ಇಂದು ಕನ್ನಡ ಪುಸ್ತಕ ನೀತಿ ಕರಡು ರಚನೆಗಾಗಿ ರೂಪಿಸಲಾದ ಸಮಿತಿ ಸದಸ್ಯರ ಪ್ರಾಥಮಿಕ ಹಂತದ ಸಭೆಯನ್ನು ಉದ್ದೇಶಿಸಿ ಕನ್ನಡ ಪುಸ್ತಕೋದ್ಯಮ ಇಂದು ಸಂಕ್ರಮಣದ ಕಾಲಘಟ್ಟದಲ್ಲಿದೆ. ಈ-ಬುಕ್, ಆಡಿಯೋ ಬುಕ್, ಅಂರ್ತಜಾಲ ಪುಸ್ತಕ ಪ್ರಕಟಣೆ ಮುಂತಾದವು ಕನ್ನಡ ಪುಸ್ತಕೋದ್ಯಮವನ್ನು ಕಾಗದರಹಿತವನ್ನಾಗಿ ಮಾಡಿದೆ. ಅದು ಪುಸ್ತಕೋದ್ಯಮದ ಅನಿವಾರ್ಯ ರೂಪವಾಗಿ ಪರಿವರ್ತನೆಯಾಗುತ್ತಿರುವ ಸಂದರ್ಭದಲ್ಲಿ ಕನ್ನಡ ಪುಸ್ತಕೋದ್ಯಮ ಅದನ್ನೂ ಒಳಗೊಂಡಂತೆ ಬೆಳೆಯಬೇಕಾಗಿರುವ ಅನಿವಾರ್ಯತೆ ಇದೆ. ಹಾಗಾಗಿ ಈ ಹಿಂದೆ ಡಾ. ಸಿದ್ಧಲಿಂಗಯ್ಯ ಅವರ ಅಧ್ಯಕ್ಷತೆಯಲ್ಲಿ ರೂಪುಗೊಂಡಿದ್ದ, ಕನ್ನಡ ಪುಸ್ತಕ ನೀತಿಯನ್ನು ಹೊಸ ದೃಷ್ಟಿಕೋನದಿಂದ ನೋಡುವ ಅವಶ್ಯಕತೆ ಇದೆ ಎಂದರು. ಈ ಹಿನ್ನೆಲೆಯಲ್ಲಿ ಆಧುನಿಕ ಮಾಧ್ಯಮಗಳ ಸವಾಲುಗಳ ಸಹಿತ ಕನ್ನಡ ಪುಸ್ತಕೋದ್ಯಮದ ಸಮಗ್ರ ಬೆಳವಣಿಗೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಹೊಸ ರೂಪದ ಕನ್ನಡ ಪುಸ್ತಕ ನೀತಿ ರಚನೆಗೆ ಕನ್ನಡ ಪುಸ್ತಕ ಪ್ರಾಧಿಕಾರ ಮುಂದಾಗಿದೆ. ಇದರ ಮುಖ್ಯ ಸಲಹೆಗಾರರಾಗಿ ಖ್ಯಾತ ವಿಮರ್ಶಕ ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ ಕೆಲಸ ಮಾಡಲಿದ್ದಾರೆ. ಇವರ ಜೊತೆ ಖ್ಯಾತ ಸಾಹಿತಿ ವಸುಧೇಂದ್ರ ಸಹ ಸಮಿತಿಯಲ್ಲಿರುತ್ತಾರೆ. ಪ್ರಾಥಮಿಕ ಹಂತದಲ್ಲಿ ಕನ್ನಡ ಪ್ರಕಾಶಕರ ಸಂಘದ ಅಧ್ಯಕ್ಷರಾದ ಶ್ರೀ ಪ್ರಕಾಶ ಕಂಬತ್ತಳ್ಳಿ, ಕಾರ್ಯದರ್ಶಿಗಳಾದ ಶ್ರೀ ನ. ರವಿಕುಮಾರ, ಕರ್ನಾಟಕ ಬರಹಗಾರರು ಮತ್ತು ಲೇಖಕರ ಸಂಘದ ಅಧ್ಯಕ್ಷರಾದ ಶ್ರೀ ನಿಡಸಾಲೆ ಪುಟ್ಟಸ್ವಾಮಯ್ಯ, ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಅಜರ್ಕಳ ಗಿರೀಶ್ ಭಟ್, ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕರಾದ ಡಾ. ಸತೀಶಕುಮಾರ ಎಸ್. ಹೊಸಮನಿ, ಮೈಸೂರು ವಿಶ್ವವಿದ್ಯಾಲಯದ ನಿರ್ದೇಶಕರಾದ ಶ್ರೀಮತಿ ವಿಜಯಕುಮಾರಿ ಕರೀಕಲ್ಲು, ಹಂಪಿ ವಿಶ್ವವಿದ್ಯಾಲಯದ ನಿರ್ದೇಶಕರಾದ ಡಾ. ಹೆಚ್.ಡಿ. ಪ್ರಶಾಂತ, ಶ್ರೀ ವೈ.ಜಿ. ಮುರಳೀಧರನ್, ಕಾನೂನು ಇಲಾಖೆಯಿಂದ ಕಾರ್ಯರ್ಶಿಗಳ ಪರವಾಗಿ ಶ್ರೀ ಎಸ್. ಅರುಣ್, ಇ-ಆಡಳಿತ (ಕೇಂದ್ರ) ವಿಭಾಗದ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಪರವಾಗಿ ಶ್ರೀಮತಿ ಪುಷ್ಪ ಎಂ, ಕನ್ನಡ ಸಾಹಿತ್ಯ ಪರಿಷತ್ತಿನ ಪರವಾಗಿ ಶ್ರೀ ಕೆ.ರಾಜಕುಮಾರ್ ಹಾಗೂ ಕನ್ನಡ ಪುಸ್ತಕ ಪ್ರಾಧಿಕಾರದ ಆಡಳಿತಾಧಿಕಾರಿ ಶ್ರೀ ಕೆ.ಬಿ. ಕಿರಣ್ ಸಿಂಗ್ ಮತ್ತು ಸಹಾಯಕ ನಿರ್ದೇಶಕರಾದ ಶ್ರೀಮತಿ ಸೌಭಾಗ್ಯ ಅವರು ಭಾಗಹಿಸಿದ್ದರು.

ಸಭೆಯಲ್ಲಿ ಪುಸ್ತಕ ನೀತಿಯ ಬಗ್ಗೆ ವಿಸ್ತೃತ ಚರ್ಚೆ ನಡೆಯಿತು. ಎಲ್ಲರ ಅಭಿಪ್ರಾಯ ಸಂಗ್ರಹಿಸಿ ಶೀಘ್ರದಲ್ಲೇ ಮತ್ತೊಂದು ಪೂರ್ಣ ಪ್ರಮಾಣದ ಸಮಿತಿ ರಚನೆ ಮಾಡಿ ಕನ್ನಡ ಪುಸ್ತಕ ನೀತಿ ರಚನೆಗೆ ಕ್ರಮಕೈಗೊಳ್ಳಲಾಗುತ್ತದೆ ಎಂದು ಡಾ. ಎಂ.ಎನ್. ನಂದೀಶ್ ಹಂಚೆ ತಿಳಿಸಿದರು.

© 2021, ಕನ್ನಡ ಪುಸ್ತಕ ಪ್ರಾಧಿಕಾರ