ಸ್ವಾಗತ ನಿಮ್ಮ ಬುಟ್ಟಿ (0) | ಒಳಗೆ | ನೋಂದಾಯಿಸು
ಸುದ್ದಿ ಸಮಾಚಾರ:

ಅಸ್ತಂಗತನಾದ ಪ್ರಖರ ರವಿ

ಪ್ರಕಟಿತ ವರ್ಷ : 13 Nov 2020 12:12 pm

ಕನ್ನಡದ ಹಿರಿಯ ಪತ್ರಕರ್ತ, ಸಾಹಿತಿ, ರವಿ ಬೆಳಗೆರೆ ನಿಧನಕ್ಕೆ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಎಂ.ಎನ್. ನಂದೀಶ್ ಹಂಚೆ ತೀವ್ರ ಶೋಕ ವ್ಯಕ್ತ ಪಡಿಸಿದ್ದಾರೆ. ಕನ್ನಡ ಪತ್ರಿಕೋದ್ಯಮಕ್ಕೆ ಹೊಸ ಆಯಾಮ ನೀಡಿದ ಪತ್ರಕರ್ತರಲ್ಲಿ ರವಿ ಬೆಳಗೆರೆ ಪ್ರಮುಖರು. ಪತ್ರಿಕೋದ್ಯಮ ಮತ್ತು ಎಲೆಕ್ಟ್ರಾನಿಕ್ ಮಾದ್ಯಮದ ಎಲ್ಲಾ ಸಾಧ್ಯತೆಗಳನ್ನು ತಮ್ಮ ಪ್ರಯೋಗಕ್ಕೆ ಒಗ್ಗಿಸಿಕೊಂಡವರು ರವಿ ಬೆಳಗೆರೆ. ಪತ್ರಕರ್ತರೊಬ್ಬರಿಗೆ ಅತಿ ದೊಡ್ಡ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಳ್ಳುವ ಸಾಧ್ಯತೆಯೂ ಇದೆ ಎಂಬುದನ್ನು ತೋರಿಸಿಕೊಟ್ಟವರು ರವಿ ಬೆಳಗೆರೆ. ಅವರೊಬ್ಬ ಅಕ್ಷರ ಮಾಂತ್ರಿಕ. ಬರಹದ ದೈತ್ಯ. ಇವು ಕೇವಲ ಅಲಂಕಾರಿಕ ಮಾತುಗಳಲ್ಲ. ಅದೇ ರೀತಿ ಜೀವಿಸಿ ತೋರಿಸಿದವರು ರವಿ ಬೆಳಗೆರೆ.

ಕನ್ನಡ ಪುಸ್ತಕ ಲೋಕಕ್ಕೆ 50ಕ್ಕೂ ಹೆಚ್ಚು ಕೃತಿಗಳನ್ನು ಕಾಣಿಕೆಯಾಗಿ ನೀಡಿದವರು ಅವರು. ಚಲನಚಿತ್ರ, ಟಿ.ವಿ., ಬುಕ್ ಶಾಪ್ ಗಳ ಹೊರತಾಗಿಯೂ ಶಿಕ್ಷಣ ಕ್ಷೇತ್ರದಲ್ಲಿ ಸಹ ತಮ್ಮ ಪ್ರಯೋಗಶೀಲತೆಯನ್ನ ಓರೆಗೆ ಹಚ್ಚಿದವರು. ಇಂತಹ ಅಪೂರ್ವ ಬರಹಗಾರನ ನಿರ್ಗಮನದಿಂದ ಕನ್ನಡ ಸಾಹಿತ್ಯ ಲೋಕ ಹಾಗೂ ಪುಸ್ತಕ ಲೋಕ ಬಹಳ ದೊಡ್ಡ ನಷ್ಟ ಅನುಭವಿಸಿದೆ. ರವಿ ಬೆಳಗೆರೆಯಂತಹ ಸೂಜಿಗಲ್ಲಿನ ಸೆಳೆತ ಉಳ್ಳ ಬರಹಗಾರರು ಮತ್ತೆ ಕನ್ನಡ ಸಾಹಿತ್ಯ ಲೋಕದಲ್ಲಿ ಕಂಡು ಬರುವುದು ವಿರಳ. ಅವರ ಅಗಲಿಕೆಯ ದುಃಖವನ್ನು ಸಹಿಸುವ ಶಕ್ತಿ ಅವರ ಕುಟುಂಬಕ್ಕೆ ಸಿಗಲಿ ಎಂದು ಡಾ. ನಂದೀಶ್ ಹಂಚೆ ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

ಕೆ.ಬಿ. ಕಿರಣ್ ಸಿಂಗ್
ಆಡಳಿತಾಧಿಕಾರಿಗಳು
ಕನ್ನಡ ಪುಸ್ತಕ ಪ್ರಾಧಿಕಾರ

© 2021, ಕನ್ನಡ ಪುಸ್ತಕ ಪ್ರಾಧಿಕಾರ