ಸ್ವಾಗತ ನಿಮ್ಮ ಬುಟ್ಟಿ (0) | ಒಳಗೆ | ನೋಂದಾಯಿಸು
ಸುದ್ದಿ ಸಮಾಚಾರ:
ಸತ್ಯಗಳ ಹುಡುಕಾಟ ಸಾಹಿತ್ಯದ ಶಕ್ತಿ - ಡಾ.ಎಚ್.ಎಸ್. ರಾಘವೇಂದ್ರರಾವ್ - ಹೆಚ್ಚಿನ ಮಾಹಿತಿಗೆ | ಪ್ರಾಧಿಕಾರದ ಪ್ರಕಟಣೆಗಳಿಗೆ ಶೇ.50% ರಿಯಾಯಿತಿ - ಹೆಚ್ಚಿನ ಮಾಹಿತಿಗೆ | ಪುಸ್ತಕಗಳನ್ನು ಕೊಂಡುಕೊಳ್ಳುವ ಬಗೆ - ಹೆಚ್ಚಿನ ಮಾಹಿತಿಗೆ |

ನಿಸಾರ್ ಅಹಮದ್ ನಿಧನಕ್ಕೆ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರ ಸಂತಾಪ

ಪ್ರಕಟಿತ ವರ್ಷ : 03 May 2020 05:47 pm

 

ಕನ್ನಡದ ಪ್ರಖ್ಯಾತ ಕವಿ ನಿಸಾರ್ ಅಹಮದ್ ಅವರ ನಿಧನಕ್ಕೆ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಎಂ ಎನ್ ನಂದೀಶ್ ಹಂಚೆ ಅವರು ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.

ಕೊನೆಯಾಯಿತು ಕನ್ನಡದ ಕಾವ್ಯ ಉತ್ಸವ ಎಂದು ಅವರ ಅಗಲಿಕೆಯ ನೋವನ್ನು ತೋಡಿಕೊಂಡಿರುವ ನಂದೀಶ್ ಹಂಚೆ ಅವರು, ನಿಸಾರ್ ಅಹಮದ್ ಅವರು ಈ ಶತಮಾನ ಕಂಡ ಶ್ರೇಷ್ಠ ಕವಿ ಎಂದು ಬಣ್ಣಿಸಿದ್ದಾರೆ.

ಪದ್ಮಶ್ರೀ, ನಾಡೋಜ, ಪಂಪ ಪ್ರಶಸ್ತಿ, ಅನ ಕೃಷ್ಣರಾಯ ಪ್ರಶಸ್ತಿ, ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಹೀಗೆ ಸಾಲು ಸಾಲು ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಿದ್ದ ನಿಸಾರ್ ಅಹಮದ್ ನಿತ್ಯೋತ್ಸವ ಕವಿ ಎಂದೇ ಪ್ರಸಿದ್ಧರಾಗಿದ್ದರು. ಅಧ್ಯಾಪಕರಾಗಿ ಅಪಾರ ಸಂಖ್ಯೆಯ ಶಿಷ್ಯರನ್ನು ಗಳಿಸಿದ್ದ ನಿಸಾರ್ ಅಹಮ್ಮದ್ ಅವರು ಎಲ್ಲ ಸಾಹಿತ್ಯಕ ಚಳವಳಿಗಳಲ್ಲಿ, ಚರ್ಚೆಗಳಲ್ಲಿ ಸದಾ ಸಕ್ರಿಯವಾಗಿದ್ದರು.

ಇಳಿ ವಯಸ್ಸಿನಲ್ಲಿಯೂ ಸಾಹಿತ್ಯಿಕ ಕಾರ್ಯಕ್ರಮಗಳನ್ನು ತಪ್ಪಿಸಿಕೊಂಡವರಲ್ಲ. ಜಲಪಾತ, ಮನಸ್ಸು ಗಾಂಧಿ ಬಜಾರು, ನಿತ್ಯೋತ್ಸವ, ಸಂಜೆ ಐದರ ಮಳೆ ಮುಂತಾದ ಅವರ ಕವನ ಸಂಕಲನಗಳು ಕನ್ನಡ ಸಾಹಿತ್ಯಕ್ಕೆ ಸಂದ ಅಪೂರ್ವ, ಅನನ್ಯ ಕವಿತೆಗಳು ಎಂಬುದು ನಿರ್ವಿವಾದ.

ಎ ಮಿಡ್ ಸಮ್ಮರ್ ನೈಟ್ಸ್ ಹಾಗೂ ಒಥೆಲೊ ಅಂತಹ ಶ್ರೇಷ್ಠ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದು ಅವರ ಮಹತ್ವದ ಕೊಡುಗೆ ಎಂಬುದು ನಿಸ್ಸಂಶಯ.

ನಿಸಾರ್ ಅಹಮದ್ ಅವರ ನಿಧನದಿಂದ ಕನ್ನಡ ಸಾಹಿತ್ಯ ಲೋಕ ಬೆಳಕಿನ ಸಿರಿ ಯೊಂದನ್ನು ಕಳೆದುಕೊಂಡಂತಾಗಿದೆ ಎಂದು ನಂದೀಶ್ ಹಂಚೆ ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

-ಕೆ.ಬಿ.ಕಿರಣ್ ಸಿಂಗ್
ಆಡಳಿತಾಧಿಕಾರಿ
ಕನ್ನಡ ಪುಸ್ತಕ ಪ್ರಾಧಿಕಾರ

© 2021, ಕನ್ನಡ ಪುಸ್ತಕ ಪ್ರಾಧಿಕಾರ