ಸ್ವಾಗತ ನಿಮ್ಮ ಬುಟ್ಟಿ (0) | ಒಳಗೆ | ನೋಂದಾಯಿಸು
ಸುದ್ದಿ ಸಮಾಚಾರ:
ಹಿ.ಚಿ. ಶಾಂತವೀರಯ್ಯ ಅವರ ನಿಧನಕ್ಕೆ ಸಂತಾಪ - ಹೆಚ್ಚಿನ ಮಾಹಿತಿಗೆ | ಜಿ ಎಸ್ ಆಮೂರ ನಿಧನಕ್ಕೆ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರ ಸಂತಾಪ - ಹೆಚ್ಚಿನ ಮಾಹಿತಿಗೆ | ಪುಸ್ತಕ ಕೊಳ್ಳುವ ಬಗೆ... - ಹೆಚ್ಚಿನ ಮಾಹಿತಿಗೆ |

ಪಾಟೀಲ ಪುಟ್ಟಪ್ಪ ನಿಧನಕ್ಕೆ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರ ಸಂತಾಪ

ಪ್ರಕಟಿತ ವರ್ಷ : 17 Mar 2020 02:57 pm

ಕನ್ನಡದ ಖ್ಯಾತ ಪತ್ರಕರ್ತ, ಕನ್ನಡಪರ ಹೋರಾಟಗಾರ, ಲೇಖಕ ಪಾಟೀಲ ಪುಟ್ಟಪ್ಪ ಅವರ ನಿಧನಕ್ಕೆ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಎಂ.ಎನ್. ನಂದೀಶ್‌ ಹಂಚೆ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ. ಪಾಟಿಲ ಪುಟ್ಟಪ್ಪ ಅವರಂತಹ ಧೀಮಂತ ವ್ಯಕ್ತಿಯ ನಿಧನದಿಂದ ಕನ್ನಡ ನಾಡು ತನ್ನ ದಿಟ್ಟ ದನಿಯನ್ನ ಕಳೆದುಕೊಂಡಂತಾಗಿದೆ  ಎಂದು ಅವರು ಹೇಳಿದ್ದಾರೆ. 

ಕನ್ನಡ ಭಾಷೆ ಮತ್ತು ಸಂಸ್ಕೃತಿ, ಕನ್ನಡ ನಾಡು ನುಡಿಯ ವಿಚಾರಗಳಲ್ಲಿ ಯಾವುದೇ ಒಡಕು ಕಂಡುಬಂದಲ್ಲಿ ಕೂಡಲೇ ಅದನ್ನು ಕಂಡಿಸಿ ಹೋರಾಟಕ್ಕೆ ಮುಂದಾಗುತ್ತಿದ್ದವರು ಪಾಟೀಲ ಪುಟ್ಟಪ್ಪ ಪಾಪು ಎಂದೇ ಪ್ರಸಿದ್ಧರು.  ಸ್ವಾತಂತ್ರ‍್ಯೋತ್ತರ ಭಾರತದ ಎಲ್ಲ ಚಳುವಳಿಗಳಲ್ಲಿ ಸಕ್ರಿಯವಾಗಿ ಭಾಗಿಯಾಗಿರುತ್ತಿದ್ದ ಪಾಟೀಲ ಪುಟ್ಟಪ್ಪ ಅವರು ಹುಟ್ಟಿದ್ದು ಇಂದಿನ ಹಾವೇರಿ ಜಿಲ್ಲೆಯ ಕುರುಬಗೊಂಡ ಎಂಬ ಚಿಕ್ಕ ಗ್ರಾಮದಲ್ಲಿ. ಬೆಳಗಾವಿಯಲ್ಲಿ ಕಾನೂನು ಅಧ್ಯಯನ ಮಾಡಿ ಮುಂಬೈನಲ್ಲಿ ವಕೀಲಿ ವೃತ್ತಿ ಕೈಗೊಂಡು ನಂತರ ಕ್ಯಾಲಿಪೋರ್ನಿಯಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಕರ್ನಾಟಕ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾಗಿ, ಕನ್ನಡ ಭಾಷಾ ಕಾವಲು ಸಮಿತಿಯ ಅಧ್ಯಕ್ಷರಾಗಿ, ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಬೆಳವಣಿಗೆಗೆ  ಅವರು ಸಲ್ಲಿಸಿದ ಸೇವೆ ಅನನ್ಯವಾದದ್ದು. 

ವಿಶ್ವವಾಣಿ ಮತ್ತು ಪ್ರಪಂಚ ಪತ್ರಿಕೆಗಳ ಮೂಲಕ ಅವರು ಕನ್ನಡದ ನೇರ, ನಿಷ್ಠರ ಬರಹಗಾರರಾಗಿ ಹೆಸರಾದರು. 1962ರಿಂದ 1974ರ ವರೆಗೆ ಎರಡು ಅವಧಿಗೆ ರಾಜ್ಯ ಸಭೆಯ ಸದಸ್ಯರಾಗಿ ಕರ್ನಾಟಕವನ್ನು ಪ್ರತಿನಿಧಿಸಿದರು. ನಮ್ಮ ದೇಶ ನಮ್ಮ ಜನ, ಕರ್ನಾಟಕದ ಕಥೆ, ಪಾಪುಪ್ರಪಂಚ, ಶಿಲಾಬಾಲಿಕೆ ನುಡಿಗಳು, ಹೊಸದನ್ನು ಕಟ್ಟೋಣ, ಮುಂತಾದ ಸಾಹಿತ್ಯಕ ಕೃತಿಗಳಿಂದ ಅವರ ಕನ್ನಡ ಭಾಷೆಯ ಹಾಗೂ ಸಂಸ್ಕೃತಿಯ ಬಗೆಗಿನ ಕಾಳಜಿಗಳು ಜನಜನಿತವಾದವು. ಕನ್ನಡದ ಯಾವುದೇ ಸಮಸ್ಯೆ ಇರಲಿ ಅಲ್ಲಿ ಪಾಟಿಲ ಪುಟ್ಟಪ್ಪ ಹಾಜರಿರುತ್ತಿದ್ದರು. ಕನ್ನಡದ ಬಗೆಗಿನ ಅವರ ಕಾಳಜಿ ಮತ್ತು ಬದ್ಧತೆ ನಿಸ್ಸಂದೇಹ ಮತ್ತು ಪ್ರಶ್ನಾತೀತವಾದವು. ಅವರ ನಿಧನದಿಂದ ಕನ್ನಡ ನಾಡು ನಿಜಕ್ಕೂ ಒಬ್ಬ ಧೀಮಂತ ನಾಯಕನನ್ನು ಕಳೆದುಕೊಂಡಂತಾಗಿದೆ ಎಂದು ಡಾ. ನಂದೀಶ್‌ ಹಂಚೆ ತಮ್ಮ ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ.

© 2020, ಕನ್ನಡ ಪುಸ್ತಕ ಪ್ರಾಧಿಕಾರ