ಸ್ವಾಗತ ನಿಮ್ಮ ಬುಟ್ಟಿ (0) | ಒಳಗೆ | ನೋಂದಾಯಿಸು
ಸುದ್ದಿ ಸಮಾಚಾರ:
ಪುಸ್ತಕ ಕೊಳ್ಳುವ ಬಗೆ... - ಹೆಚ್ಚಿನ ಮಾಹಿತಿಗೆ |

ಪ್ರೊ. ಎಲ್.ಎಸ್‌. ಶೇಷಗಿರಿರಾವ್‌ ನಿಧನಕ್ಕೆ ನಂದೀಶ್‌ ಹಂಚೆ ಸಂತಾಪ

ಪ್ರಕಟಿತ ವರ್ಷ : 20 Dec 2019 05:12 pm

ಕನ್ನಡದ ಹಿರಿಯ ಲೇಖಕ ವಿಮರ್ಶಕ ಹಾಗೂ ಕನ್ನಡ ಪುಸ್ತಕ ಪ್ರಾಧಿಕಾರದ ಮೊದಲ ಅಧ್ಯಕ್ಷರಾಗಿದ್ದ, ಪ್ರೊ. ಎಲ್.ಎಸ್. ಶೇಷಗಿರಿರಾವ್ ನಿಧನಕ್ಕೆ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಎಂ.ಎನ್‌. ನಂದೀಶ್‌ ಹಂಚೆ ತೀವ್ರಶೋಕ ವ್ಯಕ್ತಪಡಿಸಿದ್ದಾರೆ.

ಕನ್ನಡ ಸಾರಸ್ವತ ಲೋಕದಲ್ಲಿ, ಕನ್ನಡ ಭಾಷಾ ಬೆಳವಣಿಗೆಯ ದಿಸೆಯಲ್ಲಿ ಅಸಾಧಾರಣ ಕೊಡುಗೆ ನೀಡಿದವರು ಪ್ರೊ. ಎಲ್.ಎಸ್ ಶೇಷಗಿರಿರಾವ್‌. ವೃತ್ತಿಯಲ್ಲಿ ಇಂಗ್ಲೀಷ್‌ ಪ್ರಾಧ್ಯಾಪಕರಾಗಿದ್ದರೂ, ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಎಲ್.ಎಸ್.ಶೇಷಗಿರಿರಾವ್‌, ಮುಖ್ಯವಾಗಿ ಸಾಹಿತ್ಯ, ವಿಮರ್ಶಾ ಬರಹಗಳಿಂದ ತಮ್ಮನ್ನು ಹೆಚ್ಚು ಗುರುತಿಸಿಕೊಂಡರು, ವಿಮರ್ಶೆಯ ಜೊತೆಗೆ ಸಣ್ಣ ಕಥೆಗಳು ಹಾಗೂ ಇತರ ಸಾಹಿತ್ಯಿಕ ಬರಹಗಳಿಂದಲೂ ಹೆಸರು ಮಾಡಿದರು. “ಇದು ಜೀವನ”, “ಜಂಗಮಜಾತ್ರೆಯಲ್ಲಿ” ಇವರ ಪ್ರಮುಖ ಕಥಾ ಸಂಕಲನಗಳು. ಆದರೆ ಎಲ್.ಎಸ್.ಎಸ್. ಕನ್ನಡಿಗರಿಗೆ ಕೊಟ್ಟ ಬಹುದೊಡ್ಡ ಕೊಡುಗೆ ಎಂದರೆ ಕನ್ನಡ - ಕನ್ನಡ – ಇಂಗ್ಲಿಷ್‌ ನಿಂಘಟು ಹಾಗೂ ಇಂಗ್ಲಿಷ್‌ - ಕನ್ನಡ ನಿಘಂಟು. ಇದಲ್ಲದೆ ಸುಭಾಷ್‌ ಇಂಗ್ಲಿಷ್‌ - ಕನ್ನಡ ನಿಘಂಟು ಕೂಡ ಅತ್ಯಂತ ಪ್ರಮುಖವಾದದ್ದು. ಇಂಗ್ಲಿಷ್‌ ಭಾಷೆಯಲ್ಲಿ ಆಧುನಿಕ ಸಾಹಿತ್ಯ, ಪಾಶ್ಚಾತ್ಯ ಸಾಹಿತ್ಯ ವಿಚಾರ, ಸಾಹಿತ್ಯ ವಿಶ್ಲೇಷಣೆ, ಹೊಸಗನ್ನಡ ಸಾಹಿತ್ಯ, ಗ್ರೀಕ್‌ ರಂಗಭೂಮಿ ಮತ್ತು ನಾಟಕ ಮುಂತಾದ ಕೃತಿಗಳು ಶೇಷಗಿರಿರಾವ್‌ ಅವರು ಕನ್ನಡಕ್ಕೆ ಕೊಟ್ಟ ಶ್ರೇಷ್ಠ ಸಾಹಿತ್ಯ ವಿಮರ್ಶಾ ಕೃತಿಗಳಾಗಿವೆ.

ಇದೆಲ್ಲದಕ್ಕಿಂತಲೂ ಮುಖ್ಯವಾಗಿ, ಶೇಷಗಿರಿ ರಾಯರು ಬಹುದೊಡ್ಡ ಶಿಷ್ಯ ಸಂಪತನ್ನು ಹೊಂದಿದ್ದಾರೆ. ಅವರಲ್ಲಿ ಬಹುತೇಕರು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಅನನ್ಯ ಕೊಡುಗೆ ಕೊಟ್ಟ ಬರಹಗಾರರಾಗಿದ್ದಾರೆ. ಶೇಷಗಿರಿರಾವ್ ಅವರ ನಿಧನ ಪ್ರಸಕ್ತ ಕನ್ನಡ ಸಾಹಿತ್ಯ ಸಂದರ್ಭದಲ್ಲಿ ದೊಡ್ಡ ಶೂನ್ಯವೊಂದನ್ನು ಸೃಷ್ಠಿಸಿದೆ ಎಂದರೆ ಅತಿಶಯೋಕ್ತಿ ಅಲ್ಲ. ಕನ್ನಡ ಭಾಷೆ ಮತ್ತು ಸಂಸ್ಕೃತಿ ಅವರ ನಿಧನದಿಂದ ಅರ್ನಘ್ಯ ರತ್ನವೊಂದನ್ನು ಕಳೆದುಕೊಂಡಿದೆ ಎಂದು ಹೇಳಬಹುದು ಎಂದು  ಡಾ. ಎಂ.ಎನ್. ನಂದೀಶ್‌ ಹಂಚೆ ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

 ಕೆ.ಬಿ. ಕಿರಣ್‌ ಸಿಂಗ್‌
ಆಡಳಿತಾಧಿಕಾರಿ

 

© 2020, ಕನ್ನಡ ಪುಸ್ತಕ ಪ್ರಾಧಿಕಾರ