ಕನ್ನಡ ಪುಸ್ತಕ ಪ್ರಾಧಿಕಾರದ ಬಗ್ಗೆ

ಪುಸ್ತಕ ನಮ್ಮ ಬದುಕಿನ ಅಮೂಲ್ಯ ನಿಧಿ
ಪುಸ್ತಕ ನಮ್ಮ ಸಂಸ್ಕೃತಿಯ ಪ್ರತೀಕ
ಪುಸ್ತಕ ನಮ್ಮ ನಾಡಿನ ತಳಹದಿ
ಪುಸ್ತಕ ಸಂಸ್ಕೃತಿಯ ನಿರಂತರ ಪ್ರವಾಹಕ್ಕೆ ಸೇತುವೆ
ಪುಸ್ತಕ ಜ್ಞಾನ ವಿತರಣೆಯ ಪ್ರಮುಖ ಮಾಧ್ಯಮ

ಪುಸ್ತಕ ಕುರಿತು

ಅತ್ಯಂತ ಪ್ರಾಚೀನ ಪುಸ್ತಕ ಪ್ರಕಾರಗಳೆಂದರೆ

 • ಮೆಸಪೊಟೋಮಿಯಾದ ಜೆಡಿ ಫಲಕಗಳು
 • ಈಜಿಪ್ಟಿನ ಪ್ಯಾಪಿರಸ್ ಸುರುಳಿಗಳು
 • ಚೀನಿಯರು ಬೊಂಬು ಮತ್ತು ಮರದ ತೆಳು ಪಟ್ಟಿಗಳಿಂದ ಪುಸ್ತಕಗಳನ್ನು ಮೊದಲಿಗೆ ತಯಾರಿಸಿದರು.
 • ಮುದ್ರಣದ ಕಪ್ಪು ಶಾಯಿಯ ಬಳಕೆ ಕ್ರಿ.ಶ. 400ರಲ್ಲಿ ಪ್ರಾರಂಭವಾಯಿತು.
 • 1439ರಲ್ಲಿ ಇಂದಿನ ಮುದ್ರಣ ಯಂತ್ರದ ಶೋಧನೆ.
 • ಜರ್ಮನಿಯ ಯೋಹನ್ ಗುಟನ್ ಬರ್ಗ್ ಮುದ್ರಣ ಯಂತ್ರದ ಶೋಧಕ.
 • ಕನ್ನಡದ ಪ್ರಪ್ರಥಮ ಮುದ್ರಿತ ಪುಸ್ತಕ 1817ರಲ್ಲಿ ಕಲ್ಕತ್ತದಲ್ಲಿ ಪ್ರಕಟವಾದ ವಿಲಿಯಂ ಕೇರಿಯ ಗ್ರ್ಯಾಮರ್ ಆಫ್ ದಿ ಕರ್ನಾಟಕ ಲಾಂಗ್ವೇಜ್.
 • ದಾನ ಚಿಂತಾಮಣಿ ಅತ್ತಿಮಬ್ಬೆ ಕನ್ನಡದ ಶಾಂತಿಪುರಾಣದ 1000 ಪ್ರತಿಗಳನ್ನು ತಯಾರಿಸಿ ದಾನ ಮಾಡಿದ್ದರು

"ಗ್ರಂಥಗಳಿಲ್ಲದಿದ್ದಲ್ಲಿ ದೇವರೇ ಮೂಕನಾಗಿಬಿಡುತ್ತಾನೆ; ನ್ಯಾಯದೇವತೆ ನಿದ್ರಿಸುತ್ತಾಳೆ; ವಿಜ್ಞಾನ ದೇವತೆ ವಿಶ್ರಾಂತಿ ಪಡೆಯುತ್ತಾಳೆ; ತತ್ವಜ್ಞಾನ ಕುಂಟುತ್ತದೆ; ಸಾಹಿತ್ಯ ಬಾಯಿಗೆ ಬೀಗ ಹಾಕಿಕೊಂಡುಬಿಡುತ್ತದೆ; ಉಳಿದುದೆಲ್ಲವೂ ಅಂಧಕಾರದಲ್ಲಿ ಅಡಗಿಬಿಡುತ್ತವೆ" ಮಹಾತ್ಮ ಗಾಂಧೀಜಿಯವರ ಜೀವನವನ್ನು ಬದಲಾಯಿಸಿದ್ದು ಒಂದು ಪುಸ್ತಕ. ಅದು ರಸ್ಕಿನ್ನನ ಅಂಟು ದಿ ಲಾಸ್ಟ್

ಪುಸ್ತಕದ ಮಹತ್ವವನ್ನು ಅರಿತ ಕರ್ನಾಟಕ ಸರ್ಕಾರವು 1993ರಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರವನ್ನು ಸ್ಥಾಪಿಸಿತು. ಕನ್ನಡ ಪುಸ್ತಕೋದ್ಯಮವನ್ನು ಜನಪರವಾಗಿ ರೂಪಿಸಿ, ದೃಢವಾಗಿ, ವ್ಯಾಪಕವಾಗಿ ಮತ್ತು ಸಮಗ್ರವಾಗಿ ಬೆಳೆಸಿ ಭದ್ರವಾಗಿ ಬೇರೂರುವಂತೆ ಮಾಡುವ ಕನ್ನಡ ಪುಸ್ತಕ ಪ್ರಾಧಿಕಾರದ ಪ್ರಮುಖ ಧ್ಯೇಯೋದ್ದೇಶಗಳೆಂದರೆ:-

 • ಕನ್ನಡದಲ್ಲಿ ಲೇಖಕ-ಪ್ರಕಾಶಕ-ಮಾರಾಟಗಾರರ ಓದುಗರ ನಡುವೆ ಗಾಢ ಸಂಬಂಧವನ್ನು ಬೆಸೆಯುವುದು.
 • ಓದುಗರಲ್ಲಿ ಉತ್ತಮ ವಾಚನಾಭಿರುಚಿಯನ್ನು ಬೆಳೆಸುವುದು.
 • ರಾಜ್ಯಾದ್ಯಂತ ಓದುಗರಿಗೆ ಒಳ್ಳೆಯ ಪುಸ್ತಕಗಳು ಸುಲಭ ಬೆಲೆಯಲ್ಲಿ ದೊರಕುವಂತೆ ಮಾಡುವುದು.
 • ಕನ್ನಡ ಪುಸ್ತಕಗಳನ್ನು ಖರೀದಿಸಿ ಓದುಗರಿಗೆ ರಾಜ್ಯಾದ್ಯಂತ ದೊರೆಯುವಂತೆ ಮಾಡುವುದು.
 • ಕನ್ನಡ ಭಾಷೆ, ಸಾಹಿತ್ಯ ಹಾಗು ಜ್ಞಾನ ಶಾಖೆಯ ಪುಸ್ತಕಗಳನ್ನು ಪ್ರಕಟಿಸುವುದು.
 • ರಾಜ್ಯಾದ್ಯಂತ ಕನ್ನಡ ಪುಸ್ತಕ ಮಳಿಗೆಗಳನ್ನು ಸ್ಥಾಪಿಸುವುದು.

ಕನ್ನಡ ಪುಸ್ತಕ ಪ್ರಾಧಿಕಾರದ ಮೊದಲ ಅಧ್ಯಕ್ಷರು ಪ್ರೊ|| ಎಲ್.ಎಸ್. ಶೇಷಗಿರಿರಾವ್‌ರವರು. ಕನ್ನಡದ ಶ್ರೇಷ್ಠ ವಿಮರ್ಶಕರು, ವಿದ್ವಾಂಸರೂ ಆದ ಪ್ರೊ|| ಎಲ್.ಎಸ್. ಶೇಷಗಿರಿರಾವ್‌ರವರು ಪ್ರಾಧಿಕಾರಕ್ಕೆ ಭದ್ರವಾದ ಬುನಾದಿಯನ್ನು ಹಾಕಿದರು. ಜನಪ್ರಿಯ ಪುಸ್ತಕಮಾಲೆ, ವಿಜ್ಞಾನ ಪುಸ್ತಕ ಮಾಲೆ, ಮೂಲಭೂತ ಶೈಕ್ಷಣಿಕ ಮಾಲೆಯಂಥ ಹಲವಾರು ಪ್ರಕಟಣಾ ಮಾಲೆಗಳನ್ನು ಆರಂಭಿಸಿದರು. ಪ್ರಥಮ ಕನ್ನಡ ಪುಸ್ತಕ ಮೇಳವನ್ನು ಬೆಂಗಳೂರಿನಲ್ಲಿ ಬೃಹತ್ ಪ್ರಮಾಣದಲ್ಲಿ ಸಂಘಟಿಸಿ ಯಶಸ್ವಿಗೊಳಿದರು. ಪ್ರಾಧಿಕಾರದ ಆರ್ಥಿಕ ಸುಭದ್ರತೆಗೂ ರಾಯರು ಕಾರಣಕರ್ತರಾದರು.

ನಂತರದ ಅಧ್ಯಕ್ಷರು ಪ್ರೊ|| ನೆಲಮನೆ ದೇವೇಗೌಡರವರು, ಪುಸ್ತಕ ಪ್ರಕಾಶನದ ಒಳಹೊರಗನ್ನು ಬಲ್ಲ ನೆಲಮನೆ ದೇವೇಗೌಡರು ಕನ್ನಡ ಪುಸ್ತಕ ಪ್ರಾಧಿಕಾರವನ್ನು ರಾಜ್ಯ ಮಟ್ಟದಿಂದ ಗ್ರಾಮ ಮಟ್ಟಕ್ಕೆ ಕೊಂಡೊಯ್ದರು. ಗ್ರಾಮ ಪಟ್ಟಣಗಳಲ್ಲಿ, ಸಂತೆ ಮಾಳಗಳಲ್ಲಿ ಕನ್ನಡ ಪುಸ್ತಕ ಜಾತ್ರೆಗಳನ್ನು ಏರ್ಪಡಿಸಿ ಪ್ರಾಧಿಕಾರವನ್ನು ವ್ಯಾಪಕಗೊಳಿಸಿದರು.

ಪುಸ್ತಕ ಪ್ರಾಧಿಕಾರದ 3ನೇ ಅಧ್ಯಕ್ಷರು ಪ್ರೊ|| ಹೆಚ್.ಜೆ. ಲಕ್ಕಪ್ಪಗೌಡರವರು. ಸೃಜನಶೀಲ ಹಾಗೂ ಜನಪದ ಕ್ಷೇತ್ರಗಳಲ್ಲಿ ಹೆಸರಾಂತ ಲೇಖಕರಾದ ಪ್ರೊ|| ಲಕ್ಕಪ್ಪಗೌಡರು ಜಾಗತಿಕ ಚಿಂತಕರು ಜನಪರ ಮಾಲೆಯಂತಹ ಕೆಲವೊಂದು ನೂತನ ಪ್ರಕಟಣಾ ಯೋಜನೆಗಳ ಪ್ರಾರಂಭ. ಕನ್ನಡದ ಅಪ್ರತಿಮ ವಿದ್ವಾಂಸರಾದ ಡಾ|| ಶಂಬಾಜೋಷಿಯವರ ಸಮಗ್ರ ಸಾಹಿತ್ಯ ಬೃಹತ್ ಯೋಜನೆಯನ್ನು ಪೂರ್ಣಗೊಳಿಸಿದರು. ‘ಪುಸ್ತಕಲೋಕ’ ನಿಯತಕಾಲಿಕೆಯನ್ನು ಆರಂಭಿಸಿದರು.

ಮುಂದಿನ ಅಧ್ಯಕ್ಷರು ಪ್ರೊ|| ಮಲ್ಲೇಪುರಂ ಜಿ.ವೆಂಕಟೇಶರವರು. ಕನ್ನಡ ಹಾಗೂ ಸಂಸ್ಕೃತ ಭಾಷೆಗಳಲ್ಲಿ ವಿದ್ವಾಂಸರಾದ ಪ್ರೊ|| ಮಲ್ಲೇಪುರಂರವರು ಅಕ್ಷರದ ಬೆಳಕು ಕಾಣದ ಅಜ್ಞಾತವಲಯಗಳಲ್ಲಿ ಪುಸ್ತಕ ಪರಿಚಯ ಮಾಡಿಸಿದರು. ಪುಸ್ತಕ ಮೇಳಗಳನ್ನು ತಾಲ್ಲೂಕು ಮಟ್ಟಕ್ಕೆ ಕೊಂಡೊಯ್ದು ರಾಜ್ಯದ ವಿವಿಧ ತಾಲ್ಲೂಕುಗಳಲ್ಲಿ ಪುಸ್ತಕಮೇಳಗಳನ್ನು ಏರ್ಪಡಿಸಿದರು. ಕನ್ನಡದ ಸಿದ್ಧ ಪ್ರಸಿದ್ಧ ಅನೇಕ ಲೇಖಕರ ಗ್ರಂಥಗಳನ್ನು ಪ್ರಾಧಿಕಾರದಿಂದ ಪ್ರಕಟಿಸಿದರು.

ಅನಂತರದ ಅದ್ಯಕ್ಷರು ಪ್ರೊ|| ಎಸ್.ಜಿ. ಸಿದ್ದರಾಮಯ್ಯನವರ, ಕನ್ನಡದ ಪ್ರಸಿದ್ಧ ಕವಿಗಳು ಹಾಗೂ ಚಿಂತಕರು. ಪುಸ್ತಕಗಳು ಸಂಸ್ಕೃತಿಯನ್ನು ನಿರಂತರವಾಗಿ ಉಜ್ಜೀವಿಸುವ ಧಾತು- ದ್ರವ್ಯಗಳು ಎಂದು ಮನಗಂಡ ಪ್ರೊ|| ಸಿದ್ದರಾಮಯ್ಯನವರು ಯುವ ಸಮುದಯದಲ್ಲಿ ವಚನಾಭಿರುಚಿ ಹೆಚ್ಚಿಸಲು ರಾಜ್ಯಾದ್ಯಂತ ವಚನಾಭಿರುಚಿ ಕಮ್ಮಟಗಳನ್ನು ಏರ್ಪಡಿಸಿದರು. ದೇಸೀಕೃಷಿ ಮಾಲೆಯಲ್ಲಿ ಪ್ರಕಟಣೆಗಳು ಹಾಗೂ ಅಲಕ್ಷಿತ ಸಮುದಾಯವಾದ ಅಲೆಮಾರಿ ಜನಾಂಗಗಳನ್ನು ದಾಖಲುಗೊಳಿಸುವ ಮಹತ್ವದ ಕಾರ್ಯವನ್ನು ಕೈಗೊಂಡರು. ನಿಂತು ಹೋಗಿದ್ದ ಪುಸ್ತಕ ಲೋಕವನ್ನು ಪುನರಾರಂಭಿಸಿದರು.

೨೦೦೮ ರಿಂದ ೨೦೧೩ ರ ವರೆಗೆ ಅದ್ಯಕ್ಷರಾದವರು ಡಾ|| ಸಿದ್ದಲಿಂಗಯ್ಯನವರು. ಕನ್ನಡದ ಪ್ರಸಿದ್ಧ ಕವಿಗಳು, ಸಾಮಾಜಿಕ ಹೋರಾಟಗಾರರು, ಜೊತೆಗೆ ಅಪಾರ ಪುಸ್ತಕ ಪ್ರೇಮಿಗಳು.

ಡಾ|| ಸಿದ್ಧಲಿಂಗಯ್ಯನವರು ಕನ್ನಡದ ಪುಸ್ತಕ ಪ್ರಾಧಿಕಾರಕ್ಕೆ ಸೃಜನಶೀಲತೆಯ ಮತ್ತು ಔದಾರ್ಯದ ಸ್ಪರ್ಶ ನೀಡಿದವರು. ಕೆಲವೊಂದು ನೂತನ ಪುಸ್ತಕ ಮಾಲೆಗಳನ್ನು ಪ್ರಾರಂಭಿಸಿದರು.

ಕನ್ನಡದ ಪುಸ್ತಕ ಮರಾಟಗಾರರಿಗೆ ದೂರೆಯುವ ಪ್ರಯೋಜನದ ಜೊತೆಗೆ ಸಾಮಾನ್ಯ ಓದುಗರಿಗೂ ಪ್ರಾಧಿಕಾರದ ನೆರವು ದೊರೆಯಬೇಕೆಂಬ ಉದ್ದೇಶದಿಂದ ಕನ್ನಡ ಪುಸ್ತಕಗಳ ರಿಯಾಯಿತಿ ಮೇಳ ಎಂಬ ಹೊಸ ಪರಿಕಲ್ಪನೆಯನ್ನು ಜಾರಿಗೊಳಿಸಿ ಬೆಂಗಳೂರಿನಲ್ಲಿ ಎರಡು ಯಶಸ್ವಿ ಮೇಳಗಳನ್ನು ಏರ್ಪಡಿಸಿದರು.

ವೈದ್ಯವಿಜ್ಞಾನ ಸಾಹಿತ್ಯ ಮಾಲೆಯಡಿ 50 ಪುಸ್ತಕಗಳ ಪ್ರಕಟಣೆ, ಎಲೆ ಮರೆ ಕಾಯಿಯಂತೆ ಕನ್ನಡ ನಾಡು ನುಡಿಗೆ ಹೋರಾಡಿದ ಹಿರಿಯ ಚೇತನಗಳ ಜೀವನ ಚರಿತ್ರೆ ಕುರಿತ ಕನ್ನಡ ಕಟ್ಟಿದವರು ಮಾಲೆಯಡಿ 80 ಪುಸ್ತಕಗಳ ಪ್ರಕಟಣೆ ಇವು ನೂತನ ಯೋಜನೆಗಳು.

ಸಗಟು ಪುಸ್ತಕ ಖರೀದಿ ಯೋಜನೆಯಡಿ ಸಾಮಾನ್ಯವಾಗಿ 30 ಲಕ್ಷಗಳಷ್ಟು ಮೊತ್ತದ ಕನ್ನಡ ಪುಸ್ತಕಗಳನ್ನು ಪ್ರಾಧಿಕಾರದಿಂದ ಖರೀದಿಸಲಾಗುತ್ತಿತ್ತು. ಲೇಖಕರೇ ಪ್ರಕಾಶಕರಾಗಿರುವ ಹಾಗು ಸಣ್ಣ ಪ್ರಮಾಣದ ಪ್ರಕಾಶಕರಿಗೆ ನೆರವಾಗುವ ದೃಷ್ಟಿಯಿಂದ ಈ ಮೊತ್ತವನ್ನು ವರ್ಷಕ್ಕೆ ರೂ. 75 ಲಕ್ಷದವರೆಗೆ ಹೆಚ್ಚಿಸಿದ್ದಲ್ಲದೆ ಬೃಹತ್ ಪ್ರಕಾಶಕರ ಪುಸ್ತಕಗಳನ್ನು 1 ಲಕ್ಷದವರೆಗೆ ಖರೀದಿಸಲು ಕ್ರಮಕೈಗೊಂಡಿದ್ದು ಡಾ|| ಸಿದ್ದಲಿಂಗಯ್ಯನವರ ಹೆಗ್ಗಳಿಕೆ.

 • ಕನ್ನಡದ ಅತ್ಯುತ್ತಮ ಪ್ರಕಾಶನ ಪ್ರಶಸ್ತಿಯನ್ನು ಅವರ ಅವಧಿಯಲ್ಲಿ ರೂ. 50,000/-ದಿಂದ ರೂ. 1,00,000/- ವರೆಗೆ ಹೆಚ್ಚಿಸಲಾಯಿತು.
 • ಕನ್ನಡ, ಭಾಷೆ, ಸಾಹಿತ್ಯ, ಪುಸ್ತಕ ಕ್ಷೇತ್ರದಲ್ಲಿ ಅಜ್ಞಾತರಾಗಿ ದುಡಿಯುವ ಚೇತನಗಳನ್ನು ಗುರುತಿಸುವ ದೃಷ್ಟಿಯಿಂದ ಡಾ|| ಜಿ.ಪಿ. ರಾಜರತ್ನಂ ಕನ್ನಡ ಪರಿಚಾರಿಕೆಯ ಪ್ರಶಸ್ತಿಯ ಸ್ಥಾಪನೆ ಮತ್ತು ಪ್ರದಾನ.
 • ಕನ್ನಡ ಭವನದ ಆವರಣದಲ್ಲಿ ಸಿರಿಗನ್ನಡ ಪುಸ್ತಕ ಮಳಿಗೆಯ ಉದ್ಘಾಟನೆ ಹಾಗೂ ಪ್ರಾಧಿಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ರಾಜ್ಯದ ಎಲ್ಲ ಅಕಾಡೆಮಿಗಳ ಪ್ರಕಟಣೆಗಳು ಒಂದೆಡೆ ದೊರೆಯುವ ಸೌಲಭ್ಯದ ಏರ್ಪಾಟು
 • ಕಾಸರಗೋಡು, ಮಹಾರಾಷ್ಟ್ರ ಗಡಿ ಪ್ರದೇಶ, ತಮಿಳುನಾಡು ಗಡಿ ಪ್ರದೇಶಗಳಲ್ಲಿನ ಕನ್ನಡ ಶಾಲೆ ಕಾಲೇಜು ಮತ್ತು ಕನ್ನಡ ಪರ ಸಂಸ್ಥೆಗಳಿಗೆ ಒಟ್ಟಾರೆ ಪುಸ್ತಕಗಳ ವಿತರಣೆ.
 • ಅಲೆಮಾರಿ ಸಂಸ್ಕೃತಿ ಅಧ್ಯಯನ ಮಾಲೆಯನ್ನು ಮುಂದುವರೆಸಿ ಉಳಿಕೆ 21 ಪುಸ್ತಕಗಳ ಪ್ರಕಟಣೆ ಹಾಗೂ ಬಿಡುಗಡೆ.
 • ಕನ್ನಡದ ಪ್ರಾತಿನಿಧಿಕ ಕೃತಿಗಳನ್ನು ಬ್ರೈಲ್ ಲಿಪಿಗೆ ಅಳವಡಿಸುವ ಯೋಜನೆಯಡಿ ಈಗಾಗಲೇ ಪುಸ್ತಕಗಳ ಪ್ರಕಟಣೆಗೆ ಸಿದ್ಧತೆ.
 • ಕನ್ನಡ ಪುಸ್ತಕ ವಿಮರ್ಶೆಗೆ ಮೀಸಲಾದ ನಿಯತಕಾಲಿಕೆ ಪುಸ್ತಕ ಲೋಕವನ್ನು ಪುನರ್‌ರೂಪಿಸಿ ಪ್ರಕಟಣೆ.
 • ಎಲ್ಲಕ್ಕೂ ಮಿಗಿಲಾಗಿ ತಮ್ಮ ಮಹತ್ವದ ಕನಸು ‘ಕನ್ನಡ ಪುಸ್ತಕ’ನೀತಿಯನ್ನು ಪುನರ್ ರೂಪಿಸಿ ಖಚಿತರೂಪ ನೀಡಿ ಸರ್ಕಾರಕ್ಕೆ ವಿಧ್ಯುಕ್ತವಾಗಿ ಸಲ್ಲಿಸಿದ ಕೀರ್ತಿ ಡಾ|| ಸಿದ್ದಲಿಂಗಯ್ಯನವರಿಗೆ ಸಲ್ಲುತ್ತದೆ.

ಪುಸ್ತಕ ನೀತಿಯ ಮುಖ್ಯಾಂಶಗಳು

 • ಪುಸ್ತಕ ಒಂದು ಸಾಂಸ್ಕೃತಿಕ- ಆರ್ಥಿಕ ವಲಯದ ಉತ್ಪನ್ನವೆಂದು ಪರಿಗಣಿಸುವುದು.
 • ರಾಜ್ಯದ ವೈವಿಧ್ಯಮಯ ಸಾಂಸ್ಕೃತಿಕ ಪರಂಪರೆ ಹಾಗೂ ಸಂಪತ್ತನ್ನು ಪುಸ್ತಕಗಳ ರೂಪದಲ್ಲಿ ಪ್ರಚುರಪಡಿಸುವುದು.
 • ಅಂತರ ರಾಷ್ಟ್ರೀಯ ಪುಸ್ತಕ ಪ್ರಕಟಣೆ ಒಡ್ಡುತ್ತಿರುವ ಪೈಪೋಟಿಯನ್ನು ಎದುರಿಸಲು ಕನ್ನಡ ಪ್ರಕಾಶನ ಉದ್ಯಮವನ್ನು ಸಜ್ಜುಗೊಳಿಸುವುದು.
 • ಕಾಸರಗೋಡು, ಮಹಾರಾಷ್ಟ್ರ ಗಡಿ ಪ್ರದೇಶ, ತಮಿಳುನಾಡು ಗಡಿ ಪ್ರದೇಶಗಳಲ್ಲಿನ ಕನ್ನಡ ಶಾಲೆ ಕಾಲೇಜು ಮತ್ತು ಕನ್ನಡ ಪರ ಸಂಸ್ಥೆಗಳಿಗೆ ಒಟ್ಟಾರೆ ಪುಸ್ತಕಗಳ ವಿತರಣೆ.
 • ಪುಸ್ತಕ ರಚನೆ, ಪ್ರಕಟಣೆ, ಮಾರಾಟ, ಖರೀದಿಗಳಿಗೆ ಸೂಕ್ತ ವಾತಾವರಣ ಮತ್ತು ಸೌಲಭ್ಯ ಕಲ್ಪಿಸುವುದು.
 • ಕನ್ನಡ ಲೇಖಕರ ಮತ್ತು ಪ್ರಕಾಶಕರ ಹಕ್ಕುಗಳನ್ನು ಸಂರಕ್ಷಿಸಲು ನೆರವಾಗುವುದು.
 • ಕನ್ನಡ ಪುಸ್ತಕ ಕ್ಷೇತ್ರದ ಎಲ್ಲಾ ಕಾರ್ಯಚಟುವಟಿಕೆಗಳಿಗೆ ನೆಲೆಯೊದಗಿಸಲು ರಾಜ್ಯದಲ್ಲಿ ‘ಪುಸ್ತಕೋದ್ಯಾನ’ದ ಸ್ಥಾಪನೆ.

ಡಾ|| ಸಿದ್ದಲಿಂಗಯ್ಯನವರು ತಮ್ಮ ಪುಸ್ತಕ ಪ್ರೀತಿಯ ಪ್ರತೀಕವಾಗಿ ಇನ್ನು ಕೆಲವು ಕನಸುಗಳನ್ನು ನನಸಾಗಿಸಲು ಶ್ರಮಿಸಿದ್ದಾರೆ

 • ರಾಜ್ಯದಾದ್ಯಂತ ಓದುಗರ ಕೂಟಗಳ ಸ್ಥಾಪನೆ.
 • ಪುಸ್ತಕೋಧ್ಯಮದ ವಿವಿಧ ಆಯಾಮಗಳ ಸಮೀಕ್ಷೆ.
 • ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ದೊರೆತ ಸಂದರ್ಭಕ್ಕೆ ಪೂರಕವಾಗಿ ಹಳಗನ್ನಡ ಗ್ರಂಥಗಳ ಪ್ರಕಟಣೆ.
 • ಕನ್ನಡದಲ್ಲಿ ಪ್ರಕಟವಾಗುವ ಎಲ್ಲಾ ಪ್ರಕಟಣೆಗಳ ವಿವರಗಳನ್ನೊಳಗೊಂದ ಪುಸ್ತಕವಾರ್ಷಿಕೆ ಪ್ರಕಟಣೆ.
 • ಕನ್ನಡ ಪುಸ್ತಕ ಪ್ರಾಧಿಕಾರದ ಸಾಧನೆಗಳನ್ನು ಕುರಿತ ಕಿರು ಪುಸ್ತಿಕೆ.

ಹೀಗೆ ಹತ್ತು ಹಲವರು ಪುಸ್ತಕೋದ್ಯಮದ ಕನಸುಗಳನ್ನು ನನಸಾಗಿಸಲು ಡಾ|| ಸಿದ್ದಲಿಂಗಯ್ಯನವರು ಶ್ರಮಿಸಿದ್ದಾರೆ. ಇದೀಗ ಕನ್ನಡ ಪುಸ್ತಕ ಪ್ರಾಧಿಕಾರದ ಮುಂದಿರುವ ಸವಾಲುಗಳೆಂದರೆ

 • ಕನ್ನಡ ಪುಸ್ತಕ ನೀತಿಗೆ ಸರ್ಕಾರದ ಅನುಮೋದನೆ ಪಡೆದು ಜಾರಿಗೊಳಿಸುವುದು.
 • ಅತ್ಯಾಧುನಿಕ ಮುದ್ರಣ ತಂತ್ರಜ್ಞಾನದ ಅವಿಷ್ಕಾರಗಳಿಗೆ ಕನ್ನಡ ಪುಸ್ತಕ ಪ್ರಕಟಣೆಯನ್ನು ಸಜ್ಜುಗೊಳಿಸುವುದು.
 • ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ದೊರೆತ ಸಂದರ್ಭಕ್ಕೆ ಪೂರಕವಾಗಿ ಹಳಗನ್ನಡ ಗ್ರಂಥಗಳ ಪ್ರಕಟಣೆ.
 • ಕನ್ನಡದಲ್ಲಿ ಪ್ರಕಟವಾಗುವ ಎಲ್ಲಾ ಪ್ರಕಟಣೆಗಳ ವಿವರಗಳನ್ನೊಳಗೊಂದ ಪುಸ್ತಕವಾರ್ಷಿಕೆ ಪ್ರಕಟಣೆ.
 • ಅಂತರ ರಾಷ್ಟ್ರೀಯ ಪುಸ್ತಕ ಮಾರುಕಟ್ಟೆಯ ಸವಾಲುಗಳನ್ನು ಎದುರಿಸಲು ಕನ್ನಡ ಪುಸ್ತಕೋದ್ಯಮವನ್ನು ಸಜ್ಜುಗೊಳಿಸುವುದು.

ದಿನಾಂಕ:೨೮.೦೨.೨೦೧೪ರಿಂದ ಡಾ. ಬಂಜಗೆರೆ ಜಯಪ್ರಕಾಶ ಅವರು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾಗಿ ಅಧ್ಯಕ್ಷರ ಹುದ್ದೆಯನ್ನು ವಹಿಸಿಕೊಂಡಿದ್ದಾರೆ.

ಇದುವರೆಗಿನ ಅಧ್ಯಕ್ಷರುಗಳ ಹೆಸರು ಹಾಗೂ ಅವರ ಅಧಿಕಾರ ಅವಧಿ ವಿವರ
ಅಧ್ಯಕ್ಷರ ಹೆಸರು ಅವಧಿ
೧. ಪ್ರೊ. ಎಲ್.ಎಸ್. ಶೇಷಗಿರಿರಾವ್ ೨೦.೧೦.೧೯೯೩ ರಿಂದ ೫.೬.೧೯೯೫
೨. ಶ್ರೀ ನೆಲಮನೆ ಕೆ. ದೇವೇಗೌಡ ೧೨.೬.೧೯೯೫ ರಿಂದ ೧೧.೬.೧೯೯೬
೩. ಪ್ರೊ. ಹೆಚ್.ಜೆ. ಲಕ್ಕಪ್ಪಗೌಡ ೧೨.೬.೧೯೯೮ ರಿಂದ ೭.೩.೨೦೦೧
೪. ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ೧೮.೬.೨೦೦೧ ರಿಂದ ೧೩.೬.೨೦೦೪
೫. ಪ್ರೊ. ಎಸ್.ಜಿ. ಸಿದ್ದರಾಮಯ್ಯ ೨೨.೩.೨೦೦೫ ರಿಂದ ೩೧.೩.೨೦೦೮
೬. ಡಾ. ಸಿದ್ಧಲಿಂಗಯ್ಯ ೧೨.೬.೨೦೦೮ ರಿಂದ ೧೨.೬.೨೦೧೩
೭. ಆಯುಕ್ತರು/ನಿರ್ದೇಶಕರು ೧೩.೬.೨೦೧೩ ರಿಂದ ೨೭.೦೨.೨೦೧೪
೮. ಡಾ. ಬಂಜಗೆರೆ ಜಯಪ್ರಕಾಶ ೨೮.೦೨.೨೦೧೪ ರಿಂದ ೨೫-೦೨-೨೦೧೭
೯. ನಿರ್ದೇಶಕರು ೦೪.೦೨.೨೦೧೭ ರಿಂದ
ಪ್ರಕಟಿತ ಪುಸ್ತಕಗಳು
ಚಿತ್ರಗಳು